ಜೀವಾಳದ ಅಂಕೆಅಂಶಗಳು  -
	ಜನಜೀವನದಲ್ಲಿ ನಡೆಯುವ ಹುಟ್ಟು, ಸಾವು, ಮದುವೆ, ವಿವಾಹ ವಿಚ್ಛೇದನ, ದತ್ತು ಸ್ವೀಕಾರ, ಔರಸತೆಯ ನಿರ್ಧಾರ ಮುಂತಾದ ಜೀವಮಾನದ ಮುಖ್ಯ ಘಟನೆಗಳನ್ನು ಕುರಿತ ಜೀವಾಳದ ದಾಖಲೆಗಳನ್ನು (ವೈಟಲ್ ರೆಕಾಡ್ರ್ಸ್) ಆಧರಿಸಿ ವ್ಯವಸ್ಥಿತ ರೂಪದಲ್ಲಿ ಪ್ರಕಟಿಸಲಾಗುವ ಸಂಖ್ಯಾರೂಪದ ಅಂಕೆ ಅಂಶದ ವಿವರಗಳು (ವೈಟಲ್ ಸ್ಟ್ಯಾಟಿಸ್ಟಿಕ್ಸ್).

	ಹುಟ್ಟು ಸಾವಿನ ಅಧಿಕೃತ ದಾಖಲೆ ಇತಿಹಾಸಲ್ಲಿ ನಡೆಯುತ್ತಿರುವುದು ಆಧುನಿಕ ಕಾಲದಲ್ಲಿ ಮಾತ್ರವೇನಲ್ಲ. ಕ್ರಿ.ಪೂ. 1250 ರಷ್ಟು ಹಿಂದೆಯೂ ಈ ರೂಢಿ ಈಜಿಫ್ಟಿನಲ್ಲಿ ಇತ್ತು. ಆನಂತರದ ರೋಮನ್ನರ ಕಾಲದಲ್ಲೂ ಇದು ನಡೆದುಕೊಂಡು ಬಂತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಇದರ ಪ್ರಸ್ತಾಪ ಸ್ವಲ್ಪ ಬರುತ್ತದೆ. ಆದರ ಅಂದಿನ ಉದ್ದೇಶ ಬಲು ಸೀಮಿತ. ಜೀವನದ ಕೆಲವೇ ಆಗುಹೋಗುಗಳ ಪ್ರಾಸಂಗಿಕ ವಿವರಗಳನ್ನು ಒಳಗೊಂಡ ಒಂದು ದಾಖಲೆ ಮಾತ್ರ ಬೇಕಾಗಿದ್ದುದು. ಅಂದಿನ ಸರ್ಕಾರಗಳು ತೆರಿಗೆ ವಸೂಲಿ, ಶ್ರಮಜೀವಿಗಳ ಉದ್ಯಮ ನಿರ್ಬಂಧ, ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಿಕೊಳ್ಳುವುದು ಮುಂತಾದ ಚಟುವಟಿಕೆಗಳಿಗಾಗಿ ಇವನ್ನು ಉಪಯೋಗಿಸುತ್ತಿದ್ದುವು. ಹದಿನೈದನೆಯ ಶತಮಾನದ ಆರಂಭದಲ್ಲಿ ಇಗರ್ಜಿಗಳು ಜೀವಾಳದ ದಾಖಲೆಗಳನ್ನು ಬರೆದಿಡುವುದು ಜಾರಿಗೆ ಬಂತು. ಉದಾಹರಣೆಗೆ ಮಕ್ಕಳ ಹುಟ್ಟು, ನಾಮಕರಣ, ವಿವಾಹ, ಶವಸಂಸ್ಕಾರ ಮುಂತಾದವು. ಮುಖ್ಯವಾಗಿ ಇವೆಲ್ಲವೂ ಕ್ರೈಸ್ತಮತ ಸಂಬಂಧದ ದಾಖಲೆಗಳು. 1620-1674ರ ಅವಧಿಯಲ್ಲಿ ಬದುಕಿದ್ದ ಇಂಗ್ಲೆಂಡಿನ ಜಾನ್ ಗ್ರೌಟ್ ಎಂಬಾತ ಇವನ್ನು ಅಧ್ಯಯನ ಮಾಡಿ ಇವುಗಳಲ್ಲಿ ಪ್ರಾಸಂಗಿಕವಾಗಿ ದಾಖಲೆಗೊಂಡ ಅನೇಕ ಘಟನೆಗಳು ವಿಸ್ಮಯಕರವಾದ ನಿಯಮಬದ್ಧತೆಯನ್ನು ತೋರಿಸುತ್ತವೆ ಎಂಬುದನ್ನು ಶೋಧಿಸಿದ: ಗಂಡು ಮಕ್ಕಳ ಜನಸಂಖ್ಯೆ ಯಾವಾಗಲೂ ಹೆಣ್ಣು ಮಕ್ಕಳ ಜನಸಂಖ್ಯೆಯನ್ನು ಮೀರಿಸಿತ್ತು. ಆದರೆ ಯಾವುದೇ ವರ್ತಮಾನ ಕಾಲದಲ್ಲಿ ಗಂಡು ಹೆಣ್ಣುಗಳ ಸಂಖ್ಯೆ ಸರಿಸುಮಾರು ಒಂದೇ ಆಗಿರುತ್ತಿತ್ತು. ಜೀವನದ ಆರಂಭದ ವರ್ಷಗಳಲ್ಲಿ ಸಾಯುವವರ ಸಂಖ್ಯೆ ಅಧಿಕ. ನಗರಗಳಲ್ಲಿನ ಮರಣದ ಸಂಖ್ಯೆ ಹಳ್ಳಿಗಳಲ್ಲಿನದಕ್ಕಿಂತ ಹೆಚ್ಚು. ಕ್ರಮಬದ್ಧವಾಗಿ ದಾಖಲೆಗೊಂಡ ಅಂಶಗಳ ಶಾಸ್ತ್ರೀಯ ಅಧ್ಯಯನದ ಆವಶ್ಯಕತೆಯನ್ನು ಇದು ಎತ್ತಿಹಿಡಿಯಿತು. 1839ರ ವೇಳೆಗೆ ಇಂಗ್ಲೆಂಡಿನಲ್ಲಿ ಈ ಕೆಲಸಕ್ಕೆಂದೇ ಗೊಷ್ವಾರೆಗಳ ಸಂಕಲನಕಾರ (ಕಂಪೈಲರ್ ಆರ್ಫ ಅಬ್ಸ್ ಟ್ರಾಕ್ಟ್ರ್ಸ) ಎಂಬ ಹುದ್ದೆ ಮಂಜೂರಾಯಿತು. ಇದಕ್ಕೆ ನೇಮಕಗೊಂಡ ವಿಲಿಯಮ್ ಫಾರ್ ಎಂಬಾತ ನಲವತ್ತು ವರ್ಷಗಳ ಕಾಲ ಇದರಲ್ಲಿ ಕಾರ್ಯ ನಿರ್ವಹಿಸಿದ. ಅ ವೇಳೆ ಈತ ಮರಣದ ಅಂಕೆಅಂಶಗಳ ಒಂದು ನಿಯತಕಾಲಿಕ ಪ್ರಕಟಣೆಯನ್ನೇ ಆರಂಭಿಸಿದ.

	ಜೀವಾಳದ ದಾಖಲೆಗಳನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಒದಗಿಸಬೇಕು ಎನ್ನುವ ವಿಧಿ ಮೊದಲು ಪ್ರಾರಂಭವಾದದ್ದು ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ, ಇದಾದ ಬಳಿಕ ಏಷ್ಯ ಮತ್ತು ಆಫ್ರಿಕ ಖಂಡಗಳ ಅನೇಕ ರಾಷ್ಟ್ರಗಳು ಇದೇ ಕ್ರಮವನ್ನು ಜಾರಿಗೆ ತಂದುವು. ಆದರೂ ಎಲ್ಲ ದಾಖಲೆಗಳೂ ಎಲ್ಲ ರಾಷ್ಟ್ರಗಳಲ್ಲೂ ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಭಾವಿಸಲಾಗದು. ಆದ್ದರಿಂದ ಇಂಥ ದಾಖಲೆಗಳಿಂದ ವೈಜ್ಞಾನಿಕಾಂಶಗಳನ್ನು ಸಾರೀಕರಿಸುವಾಗ ಈ ಅರೆಕೊರೆಗಳ ಬಗ್ಗೆ ಲಕ್ಷ್ಯಹರಿಸಬೇಕಾಗುತ್ತದೆ.

	ವರ್ತಮಾನ ಕಾಲದಲ್ಲಿ ಜೀವಾಳದ ಅಂಕೆಅಂಶಗಳನ್ನು ನಾಲ್ಕು ಮುಖ್ಯ ಹಂತಗಳಲ್ಲಿ ನೋಂದಾಯಿಸಿ ಪರಿಶೀಲಿಸಲಾಗುತ್ತದೆ. ನೋಂದಣಿ (ರಿಜಿಸ್ಟ್ರೇಷನ್), ಸಂಕಲನ (ಕಂಪೈಲೇಷನ್) ಸಮಾಹರಣ (ಕನ್ಸಾಲಿಡೇಶನ್) ಮತ್ತು ಪ್ರಸ್ತುತಿ (ಪ್ರೆಸೆಂಟೇಷನ್), ನೋಂದಣಿಯ ವೇಳೆ ನಡೆಯುವುದು ಘಟನೆಯ ವಿಧಿವಿಹಿತ ಆಲೇಖನ. ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ಸಮುಚಿತವಾದ ಅಧಿಕಾರಿ ವ್ಯಕ್ತಿಗೆ ನೋಂದಾಯಿಸಲಾದ ಅಂಶದ ಬಗ್ಗೆ ಪ್ರಮಾಣಪತ್ರ ಕೊಡುತ್ತಾನೆ. ಈ ಪತ್ರಗಳು ವ್ಯಕ್ತಿಯ ಮುಂದಿನ ಜೀವನದಲ್ಲಿ ಉದ್ದಕ್ಕೂ ಅದರ ಬಗ್ಗೆ ಇನ್ನೂ ಕೆಲವು ಲಕ್ಷಣಗಳಿಗೂ ಸಾಕ್ಷ್ಯ ನೀಡುತ್ತವೆ. ಇಂಥ ದಾಖಲೆಗಳ ಅಂಶಗಳನ್ನೆಲ್ಲ ಒಟ್ಟುಗೂಡಿಸುವ ಹಂತ ಮುಂದಿನದು. ಸಂಕಲನ, ಇದಾದ ಬಳಿಕ ನಡೆಯುವದು ಸಮಾಹರಣ. ವಿವಿಧ ಅಂಶಗಳನ್ನು ವಯಸ್ಸು, ಲಿಂಗ, ಮುಂತಾದ ಶೀರ್ಷಿಕೆಗಳ ಕೆಳಗೆ ವರ್ಗೀಕರಿಸುವುದು, ಅವುಗಳ ಪಟ್ಟಿ ಮಾಡುವುದು ಅನೇಕೆ ವಿಧದ ಸಾಂಖ್ಯಕ ವರದಿಗಳನ್ನು ಇವುಗಳ ಅವಲಂಬನದಿಂದ ತಯಾರು ಮಾಡುವುದು ಇವೇ ಮುಂತಾದವು ಈ ಹಂತದಲ್ಲಿ ನಡೆಯುವುವು. ಸಾಮಾನ್ಯವಾಗಿ, ರಾಷ್ಟ್ರದ ಜನಗಣನೆ ಅಥವಾ ಖಾನೇಸುಮಾರಿಯ ಕಾಲದಲ್ಲಿ ನೋಂದಣಿಯಾಗುವ ವಿವರಗಳು ಜೀವಾಳದ ಅಂಕೆಅಂಶಗಳ ದರ ಮತ್ತು ಸೂಚಿಗಳಿಗೆ ಆಧಾರವಾಗುತ್ತವೆ. ವ್ಯಾಪಕವಾದ ಇಂಥ ದರ ಹಾಗೂ ಸೂಚಿಗಳ ಬಗ್ಗೆ ಎರಡು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸಬಹುದು ಹುಟ್ಟಿನ ಸ್ಥೂಲದರ ಮತ್ತು ಸಾವಿನ ಸ್ಥೂಲದರ. ಮಕ್ಕಳಹುಟ್ಟಿನಿಂದ ಜನಸಂಖ್ಯೆ ಹೆಚ್ಚುವಳಿಯಾಗುವುದನ್ನು ಹುಟ್ಟಿನ ಸ್ಥೂಲದರ ಸೂಚಿಸುತ್ತದೆ. ಈ ದರವನ್ನು ನಿರ್ಧರಿಸುವಲ್ಲಿ ನೆರವಿಗೆ ಬರುವ ಅಂಶಗಳೆಂದರೆ ನೂತನ ದಂಪತಿಗಳ ವಯಸ್ಸು, ಅಂತಸ್ತು, ಜನಜೀವನದಲ್ಲಿ ಮದುವೆಯ ಗತಿ. ಆರೋಗ್ಯ ಸ್ಥಿತಿ, ಉದ್ಯೋಗಗಳು ಇತ್ಯಾದಿ. ಈ ಪ್ರಾಚಲಗಳು ತೀರ ವ್ಯಾಪಕವಾಗಿರುವುದರಿಂದ ಹುಟ್ಟಿನ ಸ್ಥೂಲದರವನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ. ಇದು ಹೇಗೂ ಇರಲಿ ಒಂದು ನಿರ್ದಿಷ್ಟ ಕಾಲದಲ್ಲಿನ ನೂರು ಹುಟ್ಟುಗಳ ಪೈಕಿ ಜೀವಂತ ಗಂಡು ಮತ್ತು ಹೆಣ್ಣುಮಕ್ಕಳಲ್ಲಿ ಇರುವ ಪ್ರಮಾಣ ಮತ್ತು ಜನನಕಾಲದಲ್ಲಿ ಲಿಂಗ ಪ್ರಮಾಣವನ್ನು ಪಡೆದು ಜನಸಂಖ್ಯೆಯ ಮೇಲಿನ ಪ್ರಭಾವವನ್ನು ಅಂದಾಜು ಮಾಡುವುದು ಸಾಧ್ಯ.
	ಸಾವಿನ ಸ್ಥೂಲದರ ಹುಟ್ಟಿನ ದರಕ್ಕಿಂತ ಹೆಚ್ಚು ನಿಷ್ಕøಷ್ಟವಾಗಿ ಉಪಯೋಗಕ್ಕೆ ಬರುವ ಸೂಚಿ. ಜನಸಂಖ್ಯೆಯಲ್ಲಿನ ಆರೋಗ್ಯದ ಸ್ಥಿತಿಗತಿಯನ್ನು ಸರಿಸುಮಾರಾಗಿ ಪ್ರತಿನಿಧಿಸಲು ಮೊದಲು ಒದಗಿಬರುವುದು ಇದೇ. ಇದನ್ನು ಈ ಮುಂದಿನ ಸೂತ್ರದ ಅನುಸಾರವಾಗಿ ಪಡೆಯುತ್ತೇವೆ.
	
	[	ನಿರ್ದಿಷ್ಟ ಭೂಪ್ರದೇಶದಲ್ಲಿ ವಾರ್ಷಿಕ 
		ಸಾವುಗಳ ಸಂಖ್ಯೆ]

	
ಈ ಸೂತ್ರಾನುಸಾರ ಇಂಥ ಸೂಚಿಯನ್ನು ವರ್ಷದ ಯಾವಭಾಗಕ್ಕಾಗಲಿ ಇಡೀ ವರ್ಷದ ಕಾಲಮಾನಕ್ಕಾಗಲಿ ಪಂಚ ಅಥವಾ ದಶವಾರ್ಷಿಕವಾಗಿ ಆಗಲಿ ಲೆಕ್ಕ ಮಾಡುವುದು ಸಾಧ್ಯ. ನಿರ್ದಿಷ್ಟ ವಯಸ್ಸು ಅಥವಾ ಲಿಂಗಕ್ಕೆ ಅನುಸಾರವಾದ ಮರಣದ ದರವನ್ನೂ ಹೀಗೇಯೇ ಗೊತ್ತುಪಡಿಸಬಹದು. ಮರಣ ದರದ ಕಾರಣಸೂಚಿ 1,00,000 ವ್ಯಕ್ತಿಗಳಲ್ಲಿನ ಮರಣಗಳಿಗೆ ಸಂಬಂಧಸಿದ್ದು. 1,000 ಸಜೀವ ಜನನಗಳ ಪೈಕಿ ಮೊದಲ ವರ್ಷ ತುಂಬುವ ಮೊದಲೇ ಆದ ಸಾವುಗಳು ಶಿಶುಮರಣ ದರವನ್ನು ಸೂಚಿಸುತ್ತವೆ. 1,000 ವ್ಯಕ್ತಿಗಳಲ್ಲಿನ ಅನಾರೋಗ್ಯದ ದರವೂ ಒಂದು ಮುಖ್ಯ ಜೀವಾಳದ ಅಂಕೆಅಂಶ. ಇದೇ ಸೂಚಿಯನ್ನು ಪ್ರತಿ ವ್ಯಕ್ತಿಯ ಅಶಕ್ತತಾ ದಿವಸಗಳ ಸಂಖ್ಯೆಯಿಂದಲೂ ನಿರ್ಧರಿಸುವುದು ಸಾಧ್ಯ. ಮಾತೃಮರಣ, ಅನ್ಯೋನ್ಯ ಪರಿಮಾಣತ್ಮಕ ಮರಣ ಮತ್ತಿತರ ಸೂಚಿಗಳನ್ನು ಕೂಡ ತಯಾರಿಸಬಹುದು.

	ಜೀವಾಳದ ದಾಖಲೆಗಳ ನಿರ್ಮಾಣದ ವೇಳೆ ಪ್ರಜೆಗಳಿಗೆ ಅಧಿಕೃತ ಪ್ರಮಾಣ ಪತ್ರಗಳನ್ನು ಆಯಾ ದಾಖಲೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕೊಡಲಾಗುವುದು. ಹುಟ್ಟು, ಮದುವೆ, ವಿವಾಹವಿಚ್ಛೇದ, ಸಾವು-ಇವುಗಳ ಪ್ರಮಾಣ ಪತ್ರಗಳು ಕಾನೂನಿನ ದೃಷ್ಟಿಯಿಂದ ಆವಶ್ಯಕ ದಾಖಲೆಗಳು. ಔರಸತೆಯ ನಿರ್ಧಾರ, ಚುನಾವಣೆಯಲ್ಲಿ ಮತನೀಡುವ ಹಕ್ಕು, ವಿವಾಹವಾಗಲು ನ್ಯಾಯಬದ್ಧ ಹಕ್ಕು ಇವೇ ಮುಂತಾದ ಅನೇಕ ಪ್ರಸಂಗಗಳಲ್ಲಿ ಅತ್ಯುಪಯುಕ್ತ, ಮರಣದ ಪ್ರಮಾಣಪತ್ರಿಕೆ, ವಿಮಾಹಣದ ವಾರಸತೆ, ಅಸ್ತಿಪಾಸ್ತಿಗಳ ವಹಿವಾಟು-ಇವುಗಳಿಗೆ ಬೇಕಾದ ಮರಣ ತಥ್ಯವನ್ನೂ ಕಾರಣವನ್ನೂ ರುಜುವಾತುಗೊಳಿಸುತ್ತದೆ. ತಂದೆತಾಯಿಗಳ ವಿವಾಹದ ಪ್ರಮಾಣಪತ್ರಿಕೆ, ಮಕ್ಕಳ ಜನ್ಮದ ವಿಲಂಬಿತ ಪ್ರಮಾಣಪತ್ರಿಕೆಯನ್ನೂ ಪಡೆದುಕೊಳ್ಳಲು ಸಹಾಯ ಮಾಡುತ್ತವೆ. ಮಕ್ಕಳ ಔರಸತ್ವವನ್ನು ಸಿದ್ದಪಡಿಸಲೂ ಅವರನ್ನೂ ನಿರ್ಲಕ್ಷಿಸುವ ತಂದೆ ಅಥವಾ ತಾಯಿಯ ಜವಾಬ್ದಾರಿಯನ್ನು ಕಾನೂನು ರೀತ್ಯ ಸ್ಥಿರಗೊಳಿಸಲು ಈ ಪ್ರಮಾಣ ಪತ್ರಿಕೆಯ ನೆರವು ಬೇಕು. ವಿವಾಹ ವಿಚ್ಛೇದದ ಪ್ರಮಾಣ ಪತ್ರಿಕೆಯಿದ್ದಲ್ಲಿ ಹಣಕಾಸಿನ ಬಾಧ್ಯತೆಯಿಂದ ದಂಪತಿಗಳು ಪರಸ್ಪರ ವಿಮೋಚನೆ ಹೊಂದುವುದೂ ಪುನರ್‍ವಿವಾಹದ ಹಕ್ಕನ್ನು ಸ್ಥಾಪಿಸುವುದೂ ಸುಲಭದ ಕೆಲಸ.

	ಈ ಅಂಕೆಅಂಶಗಳ ಇಂಥ ಮಹತ್ತ್ವವನ್ನು ಮನಗಂಡು ವಿಶ್ವಸಂಸ್ಥೆ 1953ರಲ್ಲಿ ಜೀವಾಳದ ಅಂಕೆಅಂಶಗಳ ವ್ಯವಸ್ಥೆಗೆ ಅನುಗುಣವಾದ ತತ್ತ್ವ ಪ್ರಣಾಳಿಕೆಯೊಂದನ್ನು ಪ್ರಚುರಪಡಿಸಿತು. ಅಂತಾರಾಷ್ಟ್ರೀಯವಾದ ಅಧಿಕೃತ ಶಿಫಾರಸುಗಳನ್ನೆಲ್ಲ ಈ ಅನುಮೋದನೆ ಒಳಗೊಂಡಿದೆ. ರೂಢಿಯಲ್ಲಿರುವ ವಿವಿಧ ಕಾರ್ಯ ಪದ್ದತಿಯ ಪುರೋಭಿವೃದ್ಧಿಗೂ ಪುನಸ್ಸಂಘಟನೆಗೂ ಮೌಲ್ಯ ನಿರ್ಣಯಕ್ಕೂ ಒದಗಿ ಬರುವ ಅನೇಕ ಸಲಹೆಗಳನ್ನು ಈ ಸಂಸ್ಥೆ ನೀಡಿತು.

	ಭಾರತದಲ್ಲಿ ಜೀವಾಳದ ಅಂಕೆಅಂಶಗಳ ವ್ಯವಸ್ಥೆ : 1956ರಷ್ಟು ಹಿಂದೆಯೇ ಭಾರತ ಸರ್ಕಾರ ಜನನ, ವಿವಾಹ, ಮರಣಗಳ ದಾಖಲೆಯ ಪದ್ಧತಿಯ ಕಾನೂನನ್ನು ಜಾರಿಗೆ ತಂದಿತು. ಅನಂತರ ಮೈಸೂರು, ಅಸ್ಸಾಮಿನಂಥ ಕೆಲವು ರಾಜ್ಯಗಳು ತಮ್ಮದೇ ಆದ ಕಾನೂನನ್ನು ಜಾರಿಗೆ ತಂದವು. ಇವನ್ನೆಲ್ಲ ಶಿಷ್ಟೀಕರಿಸುವ ದಿಶೆಯಲ್ಲಿ ಭಾರತ ಇಟ್ಟ ಪ್ರಥಮ ಹೆಜ್ಜೆ ಎಂದರೆ 1970ನೆಯ ಏಪ್ರಿಲ್ 1ರಿಂದ ಜಾರಿಗೆ ಬಂದ ಜನನ ಮರಣದ ದಾಖಲೆಯ ಕೇಂದ್ರ ಮಸೂದೆ, ಇದರ ಪ್ರಕಾರ ಜನನಕ್ಕೆ ಇಂಥ ದಾಖಲೆ ನಡೆಸಲು ಇರುವ ಕಾಲಮಿತಿ ಘಟನೆ ನಡೆದ ಬಳಿಕ ಒಂದು ವಾರ ಮಾತ್ರ. ಮರಣಕ್ಕಾದರೋ ಈ ಅವಧಿ ಮೂರೇ ದಿವಸಗಳು. ಈ ಮಸೂದೆಯ ಉಲ್ಲಂಘನೆಗೆ ವಿಧಿಸಿರುವ ಶಿಕ್ಷೆ 50 ರೂಪಾಯಿಗಳವರೆಗೆ ಜುಲ್ಮಾನೆ. ಕರ್ನಾಟಕದಂಥ ಕೆಲವು ರಾಜ್ಯಗಳಲ್ಲಿ ಈ ದಾಖಲೆ ನಡೆಸುವ ಅಧಿಕಾರಿ. ಹಳ್ಳಿಯ ತಲೆಯಾಳು (ಅಥವಾ ಶ್ಯಾನುಭೋಗ). ಈತ ಪ್ರತಿ ವರ್ಷದ ಜನನ ಮರಣ ವಿವರಗಳನ್ನು ಬೇರೆಬೇರೆ ದಾಖಲೆ ಪುಸ್ತಕಗಳಲ್ಲಿ ಬರೆದಿಡುತ್ತಾನೆ. ದಾಖಲೆಯ ಸರಿತಪ್ಪು ಮತ್ತು ಪರಿಪೂರ್ಣತೆಗಳನ್ನು ಕಂದಾಯ ಅಧಿಕಾರಿಗಳೂ ಆರೋಗ್ಯ ಇಲಾಖೆಯ ಸಹಾಯಕ ಅಧಿಕಾರಿಗಳೂ ತನಿಖೆ ಮಾಡುತ್ತಾರೆ. ಈ ದಾಖಲೆ ಪುಸ್ತಕಗಳಿಂದ ಪಡೆದ ಜನನ ಮರಣಗಳ ವಿವರಗಳು, ವಯಸ್ಸು, ಲಿಂಗ, ಕಾರಣ ಮುಂತಾದ ಶೀರ್ಷಿಕೆಗಳಲ್ಲಿ ವರ್ಗೀಕೃತವಾಗಿ ಪ್ರತಿ ತಿಂಗಳೂ ತಾಲ್ಲೂಕಿನ ತಹಸೀಲ್ದಾರನಿಗೆ ಕಳಿಸಲ್ಪಡುತ್ತವೆ. ಈ ವಿಷಯ ಸಾಮಗ್ರಿ, ಆರೋಗ್ಯ ಇಲಾಖೆಯ ಅಧಿಕಾರ ವರ್ಗಕ್ಕೆ ಅವರ ಮುಂದಿನ ಅವಗಾಹನೆಗೂ ಅಧ್ಯಯನಕ್ಕೂ ರವಾನಿಸಲ್ಪಡುತ್ತವೆ. ಇಡೀ ರಾಜ್ಯದ ಅಂಕೆಅಂಶಗಳ ಸಮಾಹರಣವನ್ನು ನಡೆಸುವುದು ಈ ಅಧಿಕಾರವರ್ಗ, ಪಂಚಾಯತೀ ರಾಜ್ಯದ ಪದ್ಧತಿ ಈಚೆಗೆ ಬಂದ ಬಳಿಕ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ದಾಖಲೆಯ ಮೊದಲ ಅಧಿಕಾರಿಯಾಗಿದ್ದಾನೆ. ಪಟ್ಟಣ, ನಗರಗಳಲ್ಲಿ, ಪೌರಸಭೆ ಅಥವಾ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ದಾಖಲೆಗಳನ್ನು ಮಾಡಿಕೊಳ್ಳುತ್ತಾರೆ. ಭಾರತದ ವ್ಯವಸ್ಥೆಯಲ್ಲಿನ ನ್ಯೂನತೆಗಳು ಬಹಳ. ಕಾರ್ಯ ಪ್ರಣಾಳಿಕೆಯ ಏಕರೂಪತೆಯಲ್ಲದೆ ರಾಜ್ಯ ರಾಜ್ಯಗಳ ನಡುವೆ ನಗರ ಗ್ರಾಮಗಳ ನಡುವೆ ತುಂಬ ವ್ಯತ್ಯಾಸಗಳು ತಲೆದೋರಿವೆ. ಜನಸಮುದಾಯದ ಅಗಾಧ ಮೊತ್ತವೊಂದಕ್ಕೆ ಎಷ್ಟೋ ವೇಳೆ ದಾಖಲೆಯೆಂಬುದೇ ಇರುವುದಿಲ್ಲ. ಇದರಲ್ಲಿಯೂ ಅಪೂರ್ಣವಾಗಿರವುದು ಸರ್ವಸಾಮಾನ್ಯ. ಲಿಂಗ, ವಯಸ್ಸು ಇತ್ಯಾದಿ ವಿಷಯಗಳ ಪೂರ್ಣ ದಾಖಲೆ ಇಲ್ಲದೆ ಇರುವ ಅಲ್ಪ ಪ್ರಮಾಣದ ದಾಖಲೆಗಳೂ ಊನಗೊಂಡಿವೆ. ವೈದ್ಯಕೀಯ ನೆರವು ಸಾಕಷ್ಟಿರುವ ನಗರಗಳಲ್ಲಿ ಸಹ ಸಾವಿನ ಪ್ರಮಾಣಪತ್ರಿಕೆ ಇರುವುದೇ ಅಪರೂಪ. ಇದ್ದಲ್ಲಿಯೂ ಸಾವಿನ ಕಾರಣ ಯಥಾವತ್ತಾಗಿ ಪ್ರಮಾಣಪತ್ರದಲ್ಲಿ ಸೂಚಿತವಾಗಿರುವುದಿಲ್ಲ. ದೇಶದ ಗ್ರಾಮಾಂತರ ಪ್ರದೇಶಗಳಲ್ಲೂ ಹಳ್ಳಿಗಳಲ್ಲೂ ನೋಂದಾಣಿಕೆಗಾಗಿ ನೇಮಕಗೊಂಡ ವ್ಯಕ್ತಿಗಳು ನಿರಕ್ಷರಸ್ಥರು. ಯಥೋಚಿತ ವರದಿಯ ಬೆಲೆ ಅವರಿಗೆ ತಿಳಿದಿರುವುದಿಲ್ಲ. ಇದಲ್ಲದೆ ಕೆಲವು ರಾಜ್ಯಗಳಲ್ಲಿ ಇಂಥ ಕೆಲಸಗಳಿಗಾಗಿ ನೇಮಿತವಾಗಿರುವ ಪೋಲೀಸ್ ಮತ್ತು ರೆವಿನ್ಯೂ ಇಲಾಖೆಯವರಿಗೆ ಈ ವಿವರಗಳ ಬಗ್ಗೆ ಇರುವ ಆಸಕ್ತಿ ಕಡಿಮೆ. ಅವರ ಕಸುಬಿಗೆ ನೇರ ಸಂಬಂಧಿಸದ ಉದ್ಯೋಗವಿದು. ಇದರಿಂದಾಗಿ ವಿಷಯ ಸಾಮಾಗ್ರಿಯ ಮುಂದಣ ರವಾನೆಯಲ್ಲಿ ವಿಳಂಬ, ದಾಖಲೆಗಳನ್ನು ಕಳೆದುಕೊಳ್ಳುವುದು ಮುಂತಾದವು ತೀರ ಸಾಮಾನ್ಯ. ಕೆಲವು ವೇಳೆ ಮತ, ಭಾಷೆ ಮುಂತಾದ ಕಾರಣಗಳಿಗಾಗಿ ದಾಖಲೆಗಳನ್ನು ವಿರೂಪಗೊಳಿಸುವುದೂ ಉಂಟು. ಕೆಲವು ಖಾಯಿಲೆಗಳ ಬಗ್ಗೆ ಸಮಾಜದಲ್ಲಿ ಕಳಂಕಭಾವ ಇರುವುದರಿಂದ ಅವುಗಳ ಯಥಾರ್ಥ ವರದಿ ನಡೆಯುವುದು ಅಪರೂಪ.

	ಯಾವುದೇ ರಾಷ್ಟ್ರ ಆಧುನಿಕ ತಾಂತ್ರಿಕಾರ್ಥಿಕ ನಾಗರಿಕತೆಗೆ ಹೊಂದಿಕೊಳ್ಳದಿದ್ದಲ್ಲಿ ಅದು ಅಂತಾರಾಷ್ಟ್ರೀಯ ರಂಗದಲ್ಲಿ ತೀರ ಹಿಂದೆ ಬಿದ್ದಿರುತ್ತದೆ. ಹೀಗೆ ಹೊಂದಿಕೊಳ್ಳುವ ದಿಶೆಯಲ್ಲಿ ಆ ರಾಷ್ಟ್ರ ಇಡಬೇಕಾದ ಮೊದಲ ಕೆಲವು ಮುಖ್ಯ ಹೆಜ್ಜೆಗಳಲ್ಲಿ ಜೀವಾಳದ ಅಂಕೆಅಂಶಗಳ ವ್ಯವಸ್ಥಿತ ಸಂಗ್ರಹಣೆ ಮತ್ತು ಪ್ರಕ್ರಮೀಕರಣ. ಏಕೆಂದರೆ ಅಂತಿಮವಾಗಿ, ದೇಶದ ನೈಸರ್ಗಿಕ ಸಂಪನ್ಮೂಲಗಳನ್ನೂ ಜನಬಲವನ್ನೂ ವ್ಯವಸ್ಥಿತವಾಗಿ ಹೊಂದಿಸಿ ರಾಷ್ಟ್ರದ ಉತ್ಕರ್ಷೆಯನ್ನು ಸಾಧಿಸುವುದೊಂದೇ ಆಧುನಿಕ ತಾಂತ್ರಿಕಾರ್ಥಿಕ ನಾಗರಿಕತೆಗೆ ರಾಷ್ಟ್ರ ಹೊಂದಿಕೊಳ್ಳಲು ಇರುವ ಏಕೈಕ ಮಾರ್ಗ. ಜನಬಲದ ಅರಿವು ರಾಷ್ಟ್ರಕ್ಕೆ ಮೂಡುವುದು ಜೀವಾಳದ ಅಂಕೆಅಂಶಗಳ ಅವಲೋಕನ, ಅಧ್ಯಯನಗಳಿಂದ.
(ಪಿ.ಎಂಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ